Monday, October 19, 2009

ಮನಸ್ಸು


ಉರಿವ ಬೇಸಿಗೆಯಲ್ಲಿ ಸೂರ್ಯನಲಿ ಮುನಿಸಾಗಿ,
ದುಗುಡ ದುಮ್ಮಾನದಲಿ ಸಿಡುಕದಿರು ಮನವೇ...!

ಅಂಬರದಿ ತಂಪೆರೆವ ಮಳೆ ಬರಲು ತಲೆದೂಗಿ,
ಬೀಸೊ ಗಾಳಿಗೆ ಹೆದರಿ ಮುದುಡದಿರು ಮನವೇ...!

ಬಿಳಿಮೋಡ ಗಗನದಲಿ ಶುಭ್ರತೆಯ ಬೆಳಕಾಗಿ,
ಕಣ್ಣ ಸೆಳೆಯುವ ಪರಿಯ ನಂಬದಿರು ಮನವೇ...!

ಇಳೆಯ ಬೆಳೆಗೇ ಜೀವ ಕಾರ್ಮೋಡ ಹನಿಯಾಗಿ,
ಅಮೃತ ಸಿಂಚನವೀಯೆ ನಕ್ಕು ನಲಿ ಮನವೇ...!

ಭವ್ಯತೆಯ ಸವಿ ಬೆಳಕು ಆಸೆಗೇ ಮರುಳಾಗಿ,
ಪರರ ವಂಚಿಸಿ ಮೆರೆದು ಹಿಗ್ಗದಿರು ಮನವೇ...!

ನೂರಾರು ಹಣತೆಗಳ ಬೆಳಗು ಚೇತನವಾಗಿ,
ಕಹಿ ನುಂಗಿ ಸಿಹಿಯುಣಿಸಿ ಹೂವಾಗು ಮನವೇ...!

ಸೂರ್ಯನಿಗು ಚಂದ್ರನಿಗು ಪೃಥ್ವಿಗೂ ಮಿಗಿಲಾಗಿ,
ತಾನೆ ಮೇಲೂ ಎನುವ ಭ್ರಮೆಯ ಬಿಡು ಮನವೇ...!

ಭಾವನೆಗಳ ಕೆದಕಿ ಕಳೆದು ಹೋದುದಕೆ ಕೊರಗಿ ,
ನೆಮ್ಮದಿಯ ಅರಸುತ್ತ ಕುಗ್ಗದಿರು ಮನವೇ...!

ಸೋಲು ಗೆಲುವುಗಳನ್ನು ಸ್ವೀಕರಿಸಿ ಸಮನಾಗಿ,
ಅಳುವ ಒರೆಸುತ ನಕ್ಕು ನಗಿಸು ಮನವೇ...!

ಎಲ್ಲವೂ ಅಳಿದಾಗ ಒಳಿತು ಶಾಶ್ವತವಾಗಿ,
ನಾಳಿನಿತಿಹಾಸದಲಿ ನೆನಪಲುಳಿ ಮನವೇ...!



1 comment:

  1. Happy to see your blog. Happier to read the poems and to note your love of nature. Keep blogging. It gives a very liberating experience. If time permits you may visit mine at www.msbhat68.blogspot.com

    ReplyDelete