Monday, November 30, 2009

ಮುಗಿಲ ಸೊಬಗು.

















ಆಹಾ... ಏನಿದೂ..ಸೊಬಗು ಮುಗಿಲಿನಾ ಬೆಳ್ಗೊಡೆ,
ಬನ ಬನಗಳಲೂ ತಳಿರುಡುಗೆ ಹನಿಯಾಗಿ ಸುರಿದೊಡೆ;
ಸುಳಿಗುರುಳು ನಗೆಗನ್ನು ಅರಳಿಸುತ ನಕ್ಕು ಬಿಡೆ,
ವಸುಧೆಯಾ ಹೂಬನಕೆ ತನಿರಸವ ಕುಡಿಸಿಬಿಡೆ;
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;
.....ಮುಗಿಲೆ ನಿನ್ನೊಲವೆ ಭುವಿಗೆ ನಲಿವೂ...,
ಬೆಳೆಯ ಉಸಿರಿಗೆ ನೀನೆಂದೂ ಜೀವ ಜಲವೂ...;
ನೀ ಒಲಿದರೇ..... ವಸುಮತಿಗೆ ವೈಭವವೂ,
ನೀ ಮುನಿದರೆ ಬಾಡಿ ಹೋಗುವುದೀ ಚೇತನವು!

.




Saturday, November 21, 2009

ನೇಸರ



ಜಗವನ್ನೇ ಬೆಳಗಿಸುವ ರವಿ ನಿನಗೆ ದಣಿವೇ,
ಶರಧಿಯಲಿ ಮಿಂದೆದ್ದು ನೀ ಮೇಲೆ ಬರುವೇ;

ಥಳ್ಪು ಬೆಳ್ಪುಗಳನ್ನು ಭುವಿಗೆ ನೀ ಕೊಡುವೆ,
ತನ್ನನ್ನೇ ಸುಡುತಲಿ ಜಗದ ಕಣ್ಣಾಗುವೆ;

ನೇಸರನೆ ನಿನ್ನಿಂದ ನಾ ಪಾಠ ಕಲಿವೆ,
ಮುಳುಗಿದರು ಮೇಲೆದ್ದು ಬರುವ ಕಲೆ ಕಲಿವೆ...!

ಧ್ರುವತಾರೆ

ಸಪ್ತ ಸ್ವರವೂ ಸೇರಿ ಹೊಮ್ಮಿತು ಸಂಗೀತ ನಿನಾದ,
ನಾದದಲೇ ಮೈ ಮರೆತು ನುಡಿಸುವ ಪ್ರತಿಭೆ ಅಗಾದ;
ಏರು ಎತ್ತರಕೇರು ಕನಸ ನನಸಾಗಿಸುತ ಬೆಳೆದು,
ಬೀರು ಪ್ರಜ್ವಲತೆಯನು ಹೆತ್ತವರ ನೆನೆ ನೆನೆದು;
ಹುಣ್ಣಿಮೆಯ ಶಶಾಂಕನ ಕಾಂತಿಯಂತೆ ಬೆಳಗು,
ಸಫಲತೆಯ ಸಾಧಿಸುತ ಧ್ರುವತಾರೆಯಂತೆ ಮಿನುಗು!

ಹಸಿರ ವನ

ಏರಿಳಿಯುತ ನಡೆಯುತ್ತಿರೆ ನಮ್ಮೂರಿನ ದಾರೀ,
ದಣಿವರಿಯದು ಮನಸೆಳೆವುದು ಹಸಿರಿನ ಕೇರೀ;

ಹಸಿರಿಂದಲಿ ಹೊಳೆಯುತ್ತಿದೆ ನಿಸರ್ಗದ ನೋಟಾ,
ಸಿಂಗಾರದ ನೆಲೆವೀಡಿದು ಕಂಗೊಳಿಸುವ ತೋಟಾ;

ನಿರ್ಭಯದಲಿ ನರ್ತಿಸುತಿದೆ ತಾಣದಿ ನವಿಲು,
ವಾಸಂತಿಕೆ ಮೈ ಮರೆಸಿತು ಕಾನನದಾ ಚೆಲುವು;

ತಂಬೆಲರಿನ ಕುಡಿ ಚಿಗುರಿದೆ ಪ್ರುಥ್ವಿಯು ಹಸಿರಾಗೀ,
ಕಾರ್ಮೋಡದ ಜತೆ ಮೈತ್ರಿಯು ಪಚ್ಚನೆಯಾ ಬೆಳೆಗಾಗೀ;

ನಮ್ಮ ಬೆವರಿನ ಹನಿ ಆಸರೆ ಸುಂದರ ಹೂಬನಕೆ,
ಪ್ರೇಮದಲೀ ಬೆಳೆಯಿಸಿರುವ ಕುಸುಮಗಳಾ ಸೊಗಕೆ;

ಜಗದೊಡೆಯಾ ಪರಮಾತ್ಮಾ ಶ್ರೀಕೃಷ್ಣಗೆ ಒಲವೂ....,
ಮಣ್ಣಲಿ ಅರಳುತಲಿಹ ಪರಿಮಳದಾ ಹೂವೂ.....!

ಗೆಳತಿ

ನನ್ನ ಮನದಂಗಳದಿ ನಿನ್ನ ನೆನಪು,
ಮೂಡಿಸಿತು ಸ್ಪೂರ್ತಿಯನು ಬಂತು ಹುರುಪು;
ಹಸಿರಾಗಿರಲಿ ಸದಾ ನಮ್ಮ ಉಸಿರಾಗಿರಲಿ,
ಭಾವನೆಗಳು ಮಧುರ ಅಲೆಯಾಗಲಿ;
ನೆನಪುಗಳು ಮಾಸದೆ ಚಿರವಾಗಿರಲಿ,
ಅಕ್ಕರೆಯ ಭಾಂದವ್ಯ ಅಮರವಾಗಿರಲಿ;
ಸಾಗರದ ಅಲೆಯಂತೆ ದಡಕೊಮ್ಮೆ ಅಪ್ಪಳಿಸಿ,
ಬಂದು ಹೋಗಲಿ ಸವಿ ನೆನಪನುಳಿಸಿ;
ಉಲ್ಲಾಸ ಉತ್ಸಾಹದಾ ಚಿಲುಮೆ ಹರಿಸಿ,
ಪ್ರೀತಿ ತುಂಬಿದ ನುಡಿಯ ಸವಿಯನುಣಿಸಿ.....!

Thursday, November 19, 2009

ಗುಲಾಬಿ

ಹೂವ ಲೋಕದ ರಾಣೀ....,
ಅರೆ ಬಿರಿದು ನಗುತಿರುವೆ;
ಮುಳ್ಳು ಗಿಡದಲಿ ಅರಳಿ ನೀ....,
ಕಂಪು ಬೀರುತಲಿರುವೆ;
ಭಾವ ಲೋಕದ ಹೂ ಬನದ ಚೆಲುವೇ,
ನೆಟ್ಟಿರುಳು ಮೊಗ್ಗರಳಿ ನಿಂತಿರುವೆ;
ಎಲ್ಲ ಕಂಗಳ ಸೆಳೆದು ಪರಿಮಳವ ಪಸರಿಸುವೆ,
ಕೀಳದಿರಿ ಎನ್ನ ನಾ ಧರೆಯ ಸಿರಿ ಎನುವೇ....!





Wednesday, November 18, 2009

ಮಳೆಗಾಲ


ಮಳೆಯಾ ನೀರು ಹರಿದಿದೇ...,
ಕಡಲಾ ಸೇರ ಹೊರಟಿದೇ....;
ಜಡಿಮಳೆ ಬಿರುಗಾಳಿ,
ಸುರಿದಿದೆ ಮುಂಗಾರು;
ಕಾದ ನೆಲ ವನವೆಲ್ಲ ತಂಪಾಯ್ತು....!
ಪ್ರಕೃತಿಯ ಸೊಬಗಿಂದು,
ಹಚ್ಚನೆಯ ಹಸಿರಿಂದ;
ಕಣ್ಗೊಳಿಸಿತರಳಿದ ಹೂವಿಂದ..!
ಸುತ್ತ ಮುತ್ತಲು ಎಲ್ಲ,
ತೊರೆ ಝರಿ ನದಿ ಹಳ್ಳ;
ಅಬ್ಬರಿಸಿ ಹರಿವಾ ಜಲರಾಶಿ...!
ಜುಳು ಜುಳು ಹರಿವ ತೊರೆ,
ಉಕ್ಕಿ ಉಕ್ಕಿ ಜಲಧಾರೆ;
ಭೋರ್ಗರೆದು ದುಮ್ಮಿಕ್ಕೋ ಜಲಪಾತ...!
ಹನಿ ಹನಿ ಸುರಿವ ಮಳೆ,
ಮೈ ತುಂಬ ಹಸಿರ ಬೆಳೆ;
ಒದ್ದೆ ಒದ್ದಾಟ ಭೂಮಿ ಒಡಲೆಲ್ಲ....!