Thursday, April 8, 2010

ಕಂದಾ...


ನಗುತಲಿರು ಕಂದಾ...ಹೀಗೆಯೇ ಎಂದೆಂದೂ....,
ಹೆತ್ತವರ ಒಡಲನು ತಂಪಾಗಿಸು ಎಂದೂ....;
ಜಲಧಿಯಂತೇ ಶುದ್ಧ ಪರಿಶುದ್ಧ ಎಳೆ ಮನಸು,
ನನಸಾಗಲಿ ನಿನ್ನ ಒಡಲಾಳದ ಕನಸು!
ಮುಗ್ಧ ನಗು ಮುಗ್ಧ ಮಗು,
ನೀ ಸಾಧನೆಯ ಹಾದಿಯಲಿ,
ಸಫಲತೆಯ ಪಡೆಯುತಲಿ;
ಬೆಳೆದು ಉಜ್ವಲಿಸುತಲಿ ಮುಂದೆ ಸಾಗೂ...!


Tuesday, March 9, 2010

ಹೊಸ ಬಾಳಿನ ಹಾಡು

ಸವಿಗನಸಿನ ಹೊಂಬಯಕೆಯ ನವರಸವನು ಬೀರೀ...,
ಹೊಸಬಾಳಿನ ತಂಗಾಳಿಗೆ ಸಂಪ್ರೀತಿಯ ತೋರೀ...;
ಮಿಂಚುತಲಿದೆ ಸೌಂದರ್ಯದ ನಗೆಕಣ್ಣಿನ ಕಾಂತೀ...,
ಚಿಮ್ಮುತಲಿದೆ ನವಜೀವನದುಸಿರಿನ ಸುಖ ಶಾಂತೀ...;
ಹೊಸ ಹಗಲಿನ ತೇರೆಳೆಯುತ ಉಲ್ಲಾಸದ ನಗುವೂ..,
ಹೂವಾಗೀ ಅರಳುತಲಿದೆ ಮುಗ್ಧ ಮೊಗದ ಚೆಲುವೂ...;
ತಿರುತಿರುಗುತ ಅರಸುತಲಿದೆ ಆಂತರ್ಯದ ಒಲವೂ...,
ಕೆಂದಾವರೆ ಮನವರಳಿದೆ ಮುನ್ನಡೆಯುವ ಛಲವೂ...;
ಉಕ್ಕೇರಲಿ ಜೀವನದಲಿ ಅನುರಾಗದ ಸುಧೆಯೂ...,
ಇಂಪಾಗಿಹ ಹಾಡಾಗಲಿ ಮನದ ಸ್ಪೂರ್ತಿ ಸೆಲೆಯೂ...!

Saturday, February 13, 2010

ಹೊಸ ವರುಷ


ಕಷ್ಟಗಳ ಸಹಿಸಿ ಬೆಳಕು ಹೊತ್ತು ತಿರುಗಿ,
ಕತ್ತಲೆಯ ಬವಣೆಗಳ ಒಳಗೊಳಗೇ ನುಂಗಿ;
ಸುಟ್ಟು ಮುಕ್ತಿ ಪಡೆಯುವತ್ತ ಸಾಗಿತು....,
ಉರಿದುರಿದು ಆರುತಲಿ ತಣ್ಣಗಾಯಿತು......;
ಹಳತು ಮಾಸಿ ಹೊಸ ವರುಷ ಬಂದಿತು,
ಹರುಷದಲಿ ಹೊಸ ಹುಟ್ಟು ಪಡೆದು ನಿಂದಿತು;
ಬಾವನೆಗಳ ಚೇತರಿಕೆಗಾಗಿ...........,
ಹೊಸ ಚಿಗುರುಗಳ ಅರುಣೋದಯಕ್ಕಾಗಿ...!
ಹಳೆಯ ಕಹಿ ಮರೆಯುತ್ತ ಹೊಸತನವ ರೂಪಿಸುತ,
ಬೆಳೆವ ಗಿಡ ಮರಕೆಲ್ಲ ಜೀವ ಸೆಲೆ ತುಂಬುತ್ತ;
ಹೊಸ ಗಾಳಿ ಮಳೆ ಬೆಳಕು ಎಲ್ಲವನು ನೀಡುತಲಿ,
ಬಂದಿರುವ ಹೊಸ ವರುಷ ಹರುಷ ತರಲಿ.........!

Monday, November 30, 2009

ಮುಗಿಲ ಸೊಬಗು.

ಆಹಾ... ಏನಿದೂ..ಸೊಬಗು ಮುಗಿಲಿನಾ ಬೆಳ್ಗೊಡೆ,
ಬನ ಬನಗಳಲೂ ತಳಿರುಡುಗೆ ಹನಿಯಾಗಿ ಸುರಿದೊಡೆ;
ಸುಳಿಗುರುಳು ನಗೆಗನ್ನು ಅರಳಿಸುತ ನಕ್ಕು ಬಿಡೆ,
ವಸುಧೆಯಾ ಹೂಬನಕೆ ತನಿರಸವ ಕುಡಿಸಿಬಿಡೆ;
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;
.....ಮುಗಿಲೆ ನಿನ್ನೊಲವೆ ಭುವಿಗೆ ನಲಿವೂ...,
ಬೆಳೆಯ ಉಸಿರಿಗೆ ನೀನೆಂದೂ ಜೀವ ಜಲವೂ...;
ನೀ ಒಲಿದರೇ..... ವಸುಮತಿಗೆ ವೈಭವವೂ,
ನೀ ಮುನಿದರೆ ಬಾಡಿ ಹೋಗುವುದೀ ಚೇತನವು!

.
Saturday, November 21, 2009

ನೇಸರ


ಜಗವನ್ನೇ ಬೆಳಗಿಸುವ ರವಿ ನಿನಗೆ ದಣಿವೇ,
ಶರಧಿಯಲಿ ಮಿಂದೆದ್ದು ನೀ ಮೇಲೆ ಬರುವೇ;

ಥಳ್ಪು ಬೆಳ್ಪುಗಳನ್ನು ಭುವಿಗೆ ನೀ ಕೊಡುವೆ,
ತನ್ನನ್ನೇ ಸುಡುತಲಿ ಜಗದ ಕಣ್ಣಾಗುವೆ;

ನೇಸರನೆ ನಿನ್ನಿಂದ ನಾ ಪಾಠ ಕಲಿವೆ,
ಮುಳುಗಿದರು ಮೇಲೆದ್ದು ಬರುವ ಕಲೆ ಕಲಿವೆ...!

ಧ್ರುವತಾರೆ

ಸಪ್ತ ಸ್ವರವೂ ಸೇರಿ ಹೊಮ್ಮಿತು ಸಂಗೀತ ನಿನಾದ,
ನಾದದಲೇ ಮೈ ಮರೆತು ನುಡಿಸುವ ಪ್ರತಿಭೆ ಅಗಾದ;
ಏರು ಎತ್ತರಕೇರು ಕನಸ ನನಸಾಗಿಸುತ ಬೆಳೆದು,
ಬೀರು ಪ್ರಜ್ವಲತೆಯನು ಹೆತ್ತವರ ನೆನೆ ನೆನೆದು;
ಹುಣ್ಣಿಮೆಯ ಶಶಾಂಕನ ಕಾಂತಿಯಂತೆ ಬೆಳಗು,
ಸಫಲತೆಯ ಸಾಧಿಸುತ ಧ್ರುವತಾರೆಯಂತೆ ಮಿನುಗು!

ಹಸಿರ ವನ

ಏರಿಳಿಯುತ ನಡೆಯುತ್ತಿರೆ ನಮ್ಮೂರಿನ ದಾರೀ,
ದಣಿವರಿಯದು ಮನಸೆಳೆವುದು ಹಸಿರಿನ ಕೇರೀ;

ಹಸಿರಿಂದಲಿ ಹೊಳೆಯುತ್ತಿದೆ ನಿಸರ್ಗದ ನೋಟಾ,
ಸಿಂಗಾರದ ನೆಲೆವೀಡಿದು ಕಂಗೊಳಿಸುವ ತೋಟಾ;

ನಿರ್ಭಯದಲಿ ನರ್ತಿಸುತಿದೆ ತಾಣದಿ ನವಿಲು,
ವಾಸಂತಿಕೆ ಮೈ ಮರೆಸಿತು ಕಾನನದಾ ಚೆಲುವು;

ತಂಬೆಲರಿನ ಕುಡಿ ಚಿಗುರಿದೆ ಪ್ರುಥ್ವಿಯು ಹಸಿರಾಗೀ,
ಕಾರ್ಮೋಡದ ಜತೆ ಮೈತ್ರಿಯು ಪಚ್ಚನೆಯಾ ಬೆಳೆಗಾಗೀ;

ನಮ್ಮ ಬೆವರಿನ ಹನಿ ಆಸರೆ ಸುಂದರ ಹೂಬನಕೆ,
ಪ್ರೇಮದಲೀ ಬೆಳೆಯಿಸಿರುವ ಕುಸುಮಗಳಾ ಸೊಗಕೆ;

ಜಗದೊಡೆಯಾ ಪರಮಾತ್ಮಾ ಶ್ರೀಕೃಷ್ಣಗೆ ಒಲವೂ....,
ಮಣ್ಣಲಿ ಅರಳುತಲಿಹ ಪರಿಮಳದಾ ಹೂವೂ.....!