Monday, October 19, 2009

ಮನಸ್ಸು


ಉರಿವ ಬೇಸಿಗೆಯಲ್ಲಿ ಸೂರ್ಯನಲಿ ಮುನಿಸಾಗಿ,
ದುಗುಡ ದುಮ್ಮಾನದಲಿ ಸಿಡುಕದಿರು ಮನವೇ...!

ಅಂಬರದಿ ತಂಪೆರೆವ ಮಳೆ ಬರಲು ತಲೆದೂಗಿ,
ಬೀಸೊ ಗಾಳಿಗೆ ಹೆದರಿ ಮುದುಡದಿರು ಮನವೇ...!

ಬಿಳಿಮೋಡ ಗಗನದಲಿ ಶುಭ್ರತೆಯ ಬೆಳಕಾಗಿ,
ಕಣ್ಣ ಸೆಳೆಯುವ ಪರಿಯ ನಂಬದಿರು ಮನವೇ...!

ಇಳೆಯ ಬೆಳೆಗೇ ಜೀವ ಕಾರ್ಮೋಡ ಹನಿಯಾಗಿ,
ಅಮೃತ ಸಿಂಚನವೀಯೆ ನಕ್ಕು ನಲಿ ಮನವೇ...!

ಭವ್ಯತೆಯ ಸವಿ ಬೆಳಕು ಆಸೆಗೇ ಮರುಳಾಗಿ,
ಪರರ ವಂಚಿಸಿ ಮೆರೆದು ಹಿಗ್ಗದಿರು ಮನವೇ...!

ನೂರಾರು ಹಣತೆಗಳ ಬೆಳಗು ಚೇತನವಾಗಿ,
ಕಹಿ ನುಂಗಿ ಸಿಹಿಯುಣಿಸಿ ಹೂವಾಗು ಮನವೇ...!

ಸೂರ್ಯನಿಗು ಚಂದ್ರನಿಗು ಪೃಥ್ವಿಗೂ ಮಿಗಿಲಾಗಿ,
ತಾನೆ ಮೇಲೂ ಎನುವ ಭ್ರಮೆಯ ಬಿಡು ಮನವೇ...!

ಭಾವನೆಗಳ ಕೆದಕಿ ಕಳೆದು ಹೋದುದಕೆ ಕೊರಗಿ ,
ನೆಮ್ಮದಿಯ ಅರಸುತ್ತ ಕುಗ್ಗದಿರು ಮನವೇ...!

ಸೋಲು ಗೆಲುವುಗಳನ್ನು ಸ್ವೀಕರಿಸಿ ಸಮನಾಗಿ,
ಅಳುವ ಒರೆಸುತ ನಕ್ಕು ನಗಿಸು ಮನವೇ...!

ಎಲ್ಲವೂ ಅಳಿದಾಗ ಒಳಿತು ಶಾಶ್ವತವಾಗಿ,
ನಾಳಿನಿತಿಹಾಸದಲಿ ನೆನಪಲುಳಿ ಮನವೇ...!ಕಣ್ಮಣಿಗಳು

ಸುತ್ತ ಮುತ್ತಲ ಸೊಬಗು ಹಕ್ಕಿಗಳ ಇನಿದನಿ,
ಕೇಳುವಾ... ಕಾತರಾ... ಹುಡುಕಾಟದಲ್ಲಿ;
ಅಮ್ಮನಾ ಅಕ್ಕರೆ ವಾತ್ಸಲ್ಯದಾ ಹನಿ,
ಸವಿಯುತಲಿ ಬೆಳೆದಿರುವ ಕಣ್ಮಣಿಗಳಿಲ್ಲಿ;
ನಾಳಿನಾ ಕಲ್ಪನೆಯ ಕನಸುಗಳ ಕಟ್ಟುತಲಿ,
ಹೊಸ ಬಗೆಯ ಚಿಂತನೆ ಹುರುಪು ಮನದಲ್ಲಿ;
ವಸುಧೆಯಾ ಮನಬನದ ಮುತ್ತು ಮಾಣಿಕ್ಯಗಳೇ,
ಭರವಸೆಯ ಮೂಡಿಸುವ ಹೊನ್ನ ಕಿರಣಗಳೇ;
ಮುದ್ದಾಡಿ ಹೊತ್ತಾಡಿ ತುತ್ತಿಟ್ಟಳೂ ತಾಯಿ,
ಬೆಳವ ಸಿರಿ ಚಿಗುರುತಿದೆ ತಾಯಿ ಹಂಬಲದಂತೆ;
ತಾ ಕರಗಿ ಬೆಳಕೀವ ಮೊಂಬತ್ತಿಯಾ ತೆರದಿ;
ಉರಿದು ಬ್ರಹ್ಮಾಂಡವನೇ ಬೆಳಗಿಸುವ ಚೇತನವು,
ಹೊಮ್ಮಲೀ ಹೊರಬರಲಿ ಜಗವೇ ಕೊಂಡಾಡಲಿ;
ಬೆಳೆದು ಭವಿತವ್ಯವನು ಹಸನಾಗಿ ರೂಪಿಸುತ,
ಹೆತ್ತವರು ಹರಸುತಲಿ ಮೆಚ್ಚುವಂತಾಗಲಿ;
ಮಾಯೆಯಾ ಜಗವಿದು ಬಲು ಎಚ್ಚರದಿ ಅಡಿಯಿರಿಸಿ,
ಕೀರ್ತಿಯೆನುವಾ ನಕ್ಷತ್ರ ತಾಯಿ ಮುಡಿಗಿರಿಸಿ !
ಪ್ರಕೃತಿ


ಹಸಿರು ತೋಪುಗಳ ನಡುವೆ,
ದಿಗಂತ ಚುಂಬಿಸುತ ನಿಂತ;
ನೀರಿನ ಕಲರವ ತಂಪು ನೀಡಿವೆ,
ಮನಕೆ ಮುದ ಕೊಡುತ ಸ್ವಾತಿ ಮುತ್ತ;
ಸುಂದರ ವನಸಿರಿಗಳೆಡೆಯಲ್ಲಿ,
ಸೊಂಪಾಗಿ ಬೆಳೆದ ಹಸಿರು ತಾಣದಲಿ;
ರಂಗಾದ ತಂಪು ತರಂಗಗಳಲ್ಲಿ,
ಕುಳಿತು ಸೊಬಗು ಸವಿಯುವಾಸೆ;
ಮೇಘಗಳ ಬಳಿ ಕರೆದು ಪಿಸುಗುಟ್ಟುವಾಸೆ..!

ಭೂಮಾತೆಗೆ ನಮನ


ನಿಸರ್ಗ ರಮಣೀಯ ತಾಣ,
ಹಸನಾಗಿ ಬೆಳೆದ ಹಸಿರ ಪ್ರಾಂಗಣ;

ವನಸಿರಿಯ ಹಸಿರು ಚಿತ್ತಾರ,
ಹರಿವ ಝರಿಯ ಉಸಿರ ಝೇಂಕಾರ;

ಮನ ಬಿಚ್ಚಿ ಪಚ್ಚೆ ತೆನೆ ಓಲಾಡಿದೆ,
ತೆ೦ಗುಗಳ ನೋಟ ಕಣ್ಗೆ ಮುದ ನೀಡಿದೆ;

ತಂದಿದೆ ಜನ ಮನಕೆ ತಂಪ ಸಿಂಚನ,
ಸ್ಪೂರ್ಥಿಯಿತ್ತ ಭೂರಮೆಗೆ ಇದೋ ನನ್ನ ನಮನ!

ಚೆಂಗುಲಾಬಿ ಹೂನನ್ನ ಮನದ ತೋಟದಲಿ,
ಸೊಂಪಾಗಿ ಬೆಳೆದಿಹುದು;
ಕಂಪು ಬೀರುತಲಿರುವ ,
ಚೆಂಗುಲಾಬಿಯ ಹೂವು...!

ಮೈಯೆಲ್ಲಾ ಮುಳ್ಳಿರಲಿ,
ಕೋಮಲತೆ ತುಂಬಿಹುದು;
ಮೊಗ್ಗರಳಿ ನಗುತಿರುವ ,
ಚೆಂಗುಲಾಬಿಯ ಹೂವು..!

ಇರುಳ ಬೆಳದಿಂಗಳಲಿ,
ಚಂದ್ರನೊಡನಾಡಿಹುದು;
ಬಿಂಕ ಬಿನ್ನಾಣದಲಿ,
ಚೆಂಗುಲಾಬಿಯ ಹೂವು..!

ಅರಳಿ ಬೆಡಗಲಿ ಬೀಗಿ,
ಸೊಬಗೀವ ಸೊಕ್ಕಿಹುದು;
ಸೌಂದರ್ಯ ರಾಣಿಯೀ...,
ಚೆಂಗುಲಾಬಿಯ ಹೂವು..!

ನಭದಿಂದ ನೇಸರನ,
ಎಳೆ ಬಿಸಿಲಿಗೇ ಮೆರೆದು;
ವಯ್ಯಾರ ಬೀರಿಹುದು,
ಚೆಂಗುಲಾಬಿಯ ಹೂವು...!

ಗಾಳಿಗೆದೆಯೊಡ್ಡುತಲಿ,
ಜೋಕಾಲಿ ಆಡಿಹುದು;
ಲಾಸ್ಯ ಬೀರುತ ನಿಂತ,
ಚೆಂಗುಲಾಬಿಯ ಹೂವು..!

ದುಂಬಿಗಳ ಗುಂಜನಕೆ,
ತನ್ನನ್ನೇ ಮರೆತಿಹುದು;
ಮೃದು ಮಧುರ ಕಂಪೀವ,
ಚೆಂಗುಲಾಬಿಯ ಹೂವು..!

ಸೊಬಗು ಮೆಲ್ಲನೆ ಕಳೆದು,
ಸೌಗಂಧ ಅಳಿದಿರಲು;
ತಣ್ಣಗಾಯಿತು ನಗುವ,
ಚೆಂಗುಲಾಬಿಯ ಹೂವು..!

ಬದುಕೆಂಬ ಪಯಣದಲಿ,
ಒಂದು ದಿನದಾ ಬಾಳು;
ಸೊಬಗಿರಲು ಸೊಕ್ಕೂ,
ಮೂಡದಿರಲಿ....!

ಇರುವಸ್ಟು ದಿನ ಭುವಿಗೆ,
ಪರಿಮಳವ ಪಸರಿಸುವ;
ಚೆಂಗುಲಾಬಿಯ ಮೊಗ್ಗು,
ಅರಳುತಿರಲೀ....!

ಬೆಳ್ಮುಗಿಲುಗಳು


ಮೆಲ್ಲ ಮೆಲ್ಲನೆ ಸಾಗುತಿಹ ಬೆಳ್ಮುಗಿಲುಗಳೇ...,
ನೋಡಬಾರದೆ ಇನಿತು ನನ್ನ ಚೆಲುವ;
ಹೊಂಗನಸುಗಳ ಹೊತ್ತು ತೇಲಿ ಹೋಗುವ ಮುಗಿಲೇ,
ತಳಿರ ಕುಡಿ ಪಸರಿಸಿದೆ ತೋರ ಬಾರದೆ ಒಲವ;
ಹಸಿದೆದೆಯ ಉರಿಯ ತಣಿಸ ಬಾರದು ಏಕೆ,
ಹಸನಾಗಿ ಹೊಸ ಹರಯ ತುಂಬಿ ನಿಂತಿದೆ ಬಯಕೆ;
ಮರೆತು ಬಿಡು ಕ್ಷಣಕಾಲ ನಿನ್ನ ಪಯಣದ ಹಾದಿ,
ಕೊಳೆಯ ತೊಳೆದೂ ಮನಕೆ ನೀಡುವೆಯ ನೆಮ್ಮದಿ;
ನೆಲವು ಕಾಣದೆಯಿರುವ ಹಸಿರ ಸೋಪಾನ,
ನಿನ್ನ ಬರವಿಗೆ ಕಾದು ನೊಂದು ಹೋಗುವ ಮುನ್ನ;
ಹರಿಯ ಬಿಡು ನಿನ್ನೆದೆಯ ಭಾರವನು ಪ್ರುಥ್ವಿಯಲಿ,
ಕಾವ ತರುಲತೆಯ ತಂಪಾಗಿಸು ನಿನ್ನಾಲಿಂಗನದಲ್ಲಿ!

ತ್ಸುನಾಮಿ


ಭೋರ್ಗರೆವ ಅಲೆಗಳು ಉಕ್ಕೇರಿ ಬರುತಲಿರೆ,
ಕಂಪಿಸುತ ಭೂಮಾತೆ ಮೈಯೆಲ್ಲ ನಡುಗುತಿರೆ;

ಸಾವಿನಲೆಯಪ್ಪಳಿಸಿ ಕೈ ಬೀಸಿ ಕರೆಯುತಿರೆ,
ಆರ್ಭಟಿಸಿ ಬಂತದೋ ಕಾಲಯಮನ ಕರೆ;

ಏನಿದೂ ಘೋರ ಭೂಕಂಪ ಜಲ ಪ್ರಳಯ,
ಯಾರ ಶಾಪದ ಫಲವು ಸುತ್ತಿಕೊಂಡಿತು ಧರೆಯ;

ನಾಳೆಗಳ ಚಿಂತನೆಯ ಹೊಸ ಆಸೆಗಳ ಹೊತ್ತ,
ಮರಿ ಹಕ್ಕಿಗಳು ಕಮರಿ ಹೋದವೆತ್ತ;

ಯಾರ ಕಾಲ್ತುಳಿತಕ್ಕೆ ಭೂಮಿ ನಲುಗಿದಳೋ,
ತನ್ನದೇ ಮಕ್ಕಳನು ಬಾಯ್ತೆರೆದು ನುಂಗಿದಳೋ;

ಅರಿತವರು ಯಾರಿಹರು ಎಲ್ಲವೂ ನಶ್ವರವು,
ಯುಗಯುಗಗಳು ಕಳೆದರೂ ನಾವಿದನು ಮರೆಯೆವು;

ಯಾವ ಮಾಯೆಯ ಸಂಚೋ ಹೊಂಚಿ ಬೀಸಿದ ಬಲೆಗೆ,
ಬಿದ್ದವರು ಎದ್ದವರು ಮರೆಯರಾ ವಿಷ ಘಳಿಗೆ!
Sunday, October 18, 2009

ಸೂರ್ಯಾಸ್ತ


ದಿಗಂತದೆಲ್ಲೆಡೆ ಕುಂಕುಮ ಬೆಳಕು,
ಭಾನುವು ಭುವಿಗಿತ್ತ ಹೊಂಬೆಳಕು;
ಸೂರ್ಯನು ಕಡಲಲಿ ಮುಳುಗೇಳುವ ಕಲೆ,
ಕತ್ತಲು-ಬೆಳಕಿನ ಕಣ್ಣು-ಮುಚ್ಚಾಲೆ;
ಕಡಲಿನ ಒಡಲಲಿ ತಂಪಿನ ಸುಧೆಯಲಿ,
ಸೂರ್ಯನು ಮುಳುಗಿದನೆನ್ನುವ ಭ್ರಮೆಯಲಿ;
ನಭದಲಿ ಹಾರುವ ಹಕ್ಕಿಯ ಹಿಂಡು,
ಗೂಡನು ಸೇರಿತು ಕತ್ತಲೆ ಕಂಡು;
ದಿನಕರ ಸುಡುತಲಿ, ಬೆಳಕನು ಕೊಡುತಲಿ,
ಶ್ರಮದ ಬೆವರಹನಿ ವಸುಧೆಯಲಿಳಿಯಲಿ !
ಬಿಸಿಲಿ ಬೇಗೆಗೆ ಬಸವಳಿದಿದೆ ಭುವಿ,
ನೀಲ ಶರಧಿಯೊಳು ವಿರಮಿಸಿದನು ರವಿ;
ಕತ್ತಲು ಕಳೆಯಿತು ತಾರಾಗಡಣ,
ಬೆಳಗಿತು ತಿಂಗಳು ಬೆಳಕಿನ ಕಿರಣ;
ದಿನಮಣಿಯೊಲುಮೆ ಶಶಾಂಕನುಧಿಸಿದ,
ತ್ಯಾಗದ ಪ್ರಭೆಯನು ಇರುಳಲಿ ಬೀರಿದ!


ಬಾ ಮಳೆಯೇ ಸುರಿಸುರಿದು ಬಾ


ಬಳಲಿ ಬಾಯಾರಿದ್ದ ನನ್ನ ತ್ರುಷೆಯ ನೀಗಿಸಿ,
ಮತ್ತೆ ಮೈತುಂಬಿ ನಲಿವಂತೆ ಮಾಡಿದೆ;
ನನ್ನೊಡಲ ಬೇಗೆಯ ತಣಿಸಿ,
ನನ್ನೆದೆಯ ದಣಿವಾರಿಸಿ ನಿಂದೆ;
ಬಾ ಮಳೆಯೇ ಸುರಿಸುರಿದು ಬಾ ,
ಇಳೆಗೆ ಇಳಿದಿಳಿದು ಬಾ !

ಇಂದು ನಾ ಹಸಿರಿಂದ ತುಂಬಿ,
ಹಸಿರು ಸೀರೆಯನುಟ್ಟು ನಲಿಯುತ್ತಿರಲು;
ಅಬ್ಬರಿಸಿ ಬಂದು ನನ್ನೊಡಲ ತುಂಬಿ,
ವರ್ಷಧಾರೆ ನೀ ಸುರಿಸುತ್ತಿರಲು;
ನವಿರಾಗಿ ಕಂಪಿಸುತಿದೆ ನನ್ನೆದೆ,
ನಿನ್ನೊಡನೆ ಹೀಗೆ.. ಮೈತ್ರಿಯಿಂದಿರುವಾಸೆ;
ನೀ ಮುನಿಯದೆ ಸತಾಯಿಸದೆ ,
ಪ್ರುಥ್ವಿಯನೆಂದೂ ತೋಯಿಸುವಾಸೆ;
ಬಾ ಮಳೆಯೇ ಸುರಿಸುರಿದು ಬಾ,
ಇಳೆಗೆ ಇಳಿದಿಳಿದು ಬಾ!

ಕಾಲ ಕಾಲಕ್ಕೆ ಹಿತವಾಗಿ ಸುರಿಸಿ,
ನನ್ನೊಡಲ ಬಳ್ಳಿಯ ಬೆಳೆಯಿಸುತ ನಿಂತು;
ಚಿರ ನೂತನೆಯಾಗಿರುವಂತೆ ಹರಸಿ,
ಪುಳಕಿಸು ಬಾ ಇಳೆಯ ಹೂ ಮುತ್ತನಿತ್ತು;
ಸದ್ದಿಲ್ಲದೆ ಬಂದು ನನ್ನೊಡಲ ತಣಿಸಿ,
ಪ್ರೀತಿಧಾರೆಯಲೆನ್ನ ತೋಯಿಸು ಬಾ!

ಕಣ್ ಸೆಳೆವ ಮಿಂಚಿನ ಚಿತ್ತಾರ ಬಿಡಿಸಿ,
ಎನ್ನ ಮನದ ಆಸೆಯ ತೀರಿಸು ಬಾ;
ಬಾ ಮಳೆಯೆ ಸುರಿಸುರಿದು ಬಾ,
ಇಳೆಗೆ ಇಳಿದಿಳಿದು ಬಾ.......!

ಆಸೆ


ಆಸೆ
ಬಾನಿನಂಗಳ ನೀಲಿ,
ಮುಗಿಲೊಳಗೆ ತೇಲಿ;
ಉಯ್ಯಾಲೆಯಾಡುವಾಸೆ !

ತಾರೆಗಳ ತೋಟ;
ಚಂದ್ರಮನ ನೋಟ,
ಕಣ್ಗಳಲಿ ತುಂಬೊ ಆಸೆ !

ನೀಲಿ ಕಡಲಿನ ಆಳ,
ಮೇಲೆ ಅಲೆಗಳ ಮೇಳ;
ಇಳಿದು ಅರಿಯುವಾ ಆಸೆ !

ಮುಂಗಾರು ಮಳೆಯಲ್ಲಿ ,
ಹಸಿರಾಗಿ ಇಳೆಯಲ್ಲಿ;
ಹುಟ್ಟಿ ಬೆಳೆಯುವಾ ಆಸೆ !

ತಾಯಿ ಮಮತೆತಾಯಿ ಮಮತೆ


ಅಂದು
ನಾನಾಗಿದ್ದೆ ,
ಪುಟ್ಟ ಸುಂದರ ಹಕ್ಕಿ;
ಹಾರಲಾರದೆ ಎಡವಿದ್ದೆ,
ತಾಯ ಬಳಿ ದುಖವುಕ್ಕಿ !

ರೆಕ್ಕೆ ಪುಕ್ಕವು ಬಲಿತು,
ಹಾರುವುದ ನಾ ಕಲಿತೆ;
ಬೆಳ್ಮುಗಿಲಿನೊಳು ಬೆರೆತು,
ತಾಯಿ ಮಮತೆಯ ಮರೆತೆ;

ಥಳುಕು ಬಳುಕಿನ ಜಗವು,
ದೂರ ಗಗನದ ನಾಡು;
ನೋವು
ನುಂಗಿದ ನಗುವು,
ತಾಯಿ ಒಡಲಿನ ಹಾಡು;

ಯಾಕೆ ಕೊರಗುವೆಯಂತೆ,
ನಿನಗಿರಲಿ
ನಿಶ್ಚಿಂತೆ;
ಹಾರುವಾಸೆಗೆ ಗರಿಯಾಗು,
ನೋಡು
ಲೋಕದ ಬೆಡಗು;

ಪ್ರುಥ್ವಿಯಿಂದಾಗಸಕೆ
,
ನೀಲಿ ಗಗನದಿ ಪಯಣ;
ನೊಂದ
ತಾಯಿಯ ಮನ,
ಮಿಡಿಯಿತು
ಅಂಥಕರಣ;

ಬಾಳ
ಸವಿಗೊಂದೆ ಕುಡಿ,
ಕಳಚಿ ಹೋಯಿತು ಕೊಂಡಿ;
ಎಂದೆನುತ ಮರುಗದಿರು,
ನೀನಿಲ್ಲದೆನಗಾರು
;

ಪ್ರೀತಿ
ಅರಳಿಸಿ ನಗುವ,
ಕರೆಯೆ
ಮರೆಯಿಸಿತಮ್ಮ;
ಭಾವದೊರತೆಯ
ಜೀವ,
ಮೇರೆ ಮೀರಿತು ಅಮ್ಮ;

ತಾಯಿ
ಮಗುವಿನ ಮೈತ್ರಿ,
ಜನ್ಮ ಜನ್ಮದ ಬಂಧ;
ನೆನೆಯುವೆನು ದಿನರಾತ್ರಿ,
ನಾನೆಂದೂ ನಿನ ಕಂದ!

..............................................................................................................................................................

ಸೂರ್ಯಕಾಂತಿ

ಸೂರ್ಯಕಾಂತಿ
ಪೂರ್ವ ದಿಗಂತದಿ ಸೂರ್ಯನುದಯಕೆ,
ಅರಳಿ ನಿಂತಿಹ ಹೊಂಬೆಳಕೇ...;

ದಿಟ್ಟತನದಲಿ ಎದ್ದು ನಿಂತೆ,
ದಳವ ಬಿಡಿಸುತ ಅರಳಿ ನಿಂತೆ;

ಮನದಿ ನೂರು ಆಸೆ ತಂದೆ,
ಒಲವ ತೋರಿ ಸನಿಹ ಕರೆದೆ;

ನನ್ನೆದೆಯಲಿ ನೂರು ಭಾವ,
ನಿನ್ನ ನೋಡುತ ಮರೆತೆ ನೋವ;

ನಿನ್ನ ಚೆಲುವಿಗೆ ಸೋತು ಹೋದೆ,
ಬಣ್ಣ ಬೆಡಗಿಗೆ ನಾನು ನಲಿದೆ;

ಎಲ್ಲ ಹೊಗಳಿದಾಗ ಹಿಗ್ಗಿಹೆ,
ಭಾವನೆಗಳ ಬೆಸೆದು ನಗುತಿಹೆ;

ನನ್ನ ಹೃದಯದ ಪ್ರೀತಿ ಕಸಿದೆ,
ಕಣ್ಣ ತುಂಬ ಕಾಂತಿ ತುಂಬಿದೆ;

ಸೂರ್ಯ ಮುಳುಗಿದಾಗ ಮುದುಡಿ,
ತಲೆಯ ಬಗ್ಗಿಸಿ ಮನಸು ಬಾಡಿ;

ದಳವ ಉದುರಿಸಿ ತಾಯಿ ಮಡಿಲಿಗೆ,
ಬಾಡಿ ಹೋದೆಯ ಮೆಲ್ಲಗೆ !