Sunday, October 18, 2009

ಬಾ ಮಳೆಯೇ ಸುರಿಸುರಿದು ಬಾ


ಬಳಲಿ ಬಾಯಾರಿದ್ದ ನನ್ನ ತ್ರುಷೆಯ ನೀಗಿಸಿ,
ಮತ್ತೆ ಮೈತುಂಬಿ ನಲಿವಂತೆ ಮಾಡಿದೆ;
ನನ್ನೊಡಲ ಬೇಗೆಯ ತಣಿಸಿ,
ನನ್ನೆದೆಯ ದಣಿವಾರಿಸಿ ನಿಂದೆ;
ಬಾ ಮಳೆಯೇ ಸುರಿಸುರಿದು ಬಾ ,
ಇಳೆಗೆ ಇಳಿದಿಳಿದು ಬಾ !

ಇಂದು ನಾ ಹಸಿರಿಂದ ತುಂಬಿ,
ಹಸಿರು ಸೀರೆಯನುಟ್ಟು ನಲಿಯುತ್ತಿರಲು;
ಅಬ್ಬರಿಸಿ ಬಂದು ನನ್ನೊಡಲ ತುಂಬಿ,
ವರ್ಷಧಾರೆ ನೀ ಸುರಿಸುತ್ತಿರಲು;
ನವಿರಾಗಿ ಕಂಪಿಸುತಿದೆ ನನ್ನೆದೆ,
ನಿನ್ನೊಡನೆ ಹೀಗೆ.. ಮೈತ್ರಿಯಿಂದಿರುವಾಸೆ;
ನೀ ಮುನಿಯದೆ ಸತಾಯಿಸದೆ ,
ಪ್ರುಥ್ವಿಯನೆಂದೂ ತೋಯಿಸುವಾಸೆ;
ಬಾ ಮಳೆಯೇ ಸುರಿಸುರಿದು ಬಾ,
ಇಳೆಗೆ ಇಳಿದಿಳಿದು ಬಾ!

ಕಾಲ ಕಾಲಕ್ಕೆ ಹಿತವಾಗಿ ಸುರಿಸಿ,
ನನ್ನೊಡಲ ಬಳ್ಳಿಯ ಬೆಳೆಯಿಸುತ ನಿಂತು;
ಚಿರ ನೂತನೆಯಾಗಿರುವಂತೆ ಹರಸಿ,
ಪುಳಕಿಸು ಬಾ ಇಳೆಯ ಹೂ ಮುತ್ತನಿತ್ತು;
ಸದ್ದಿಲ್ಲದೆ ಬಂದು ನನ್ನೊಡಲ ತಣಿಸಿ,
ಪ್ರೀತಿಧಾರೆಯಲೆನ್ನ ತೋಯಿಸು ಬಾ!

ಕಣ್ ಸೆಳೆವ ಮಿಂಚಿನ ಚಿತ್ತಾರ ಬಿಡಿಸಿ,
ಎನ್ನ ಮನದ ಆಸೆಯ ತೀರಿಸು ಬಾ;
ಬಾ ಮಳೆಯೆ ಸುರಿಸುರಿದು ಬಾ,
ಇಳೆಗೆ ಇಳಿದಿಳಿದು ಬಾ.......!

No comments:

Post a Comment