skip to main |
skip to sidebar
ಕಷ್ಟಗಳ ಸಹಿಸಿ ಬೆಳಕು ಹೊತ್ತು ತಿರುಗಿ,
ಕತ್ತಲೆಯ ಬವಣೆಗಳ ಒಳಗೊಳಗೇ ನುಂಗಿ;
ಸುಟ್ಟು ಮುಕ್ತಿ ಪಡೆಯುವತ್ತ ಸಾಗಿತು....,
ಉರಿದುರಿದು ಆರುತಲಿ ತಣ್ಣಗಾಯಿತು......;
ಹಳತು ಮಾಸಿ ಹೊಸ ವರುಷ ಬಂದಿತು,
ಹರುಷದಲಿ ಹೊಸ ಹುಟ್ಟು ಪಡೆದು ನಿಂದಿತು;
ಬಾವನೆಗಳ ಚೇತರಿಕೆಗಾಗಿ...........,
ಹೊಸ ಚಿಗುರುಗಳ ಅರುಣೋದಯಕ್ಕಾಗಿ...!
ಹಳೆಯ ಕಹಿ ಮರೆಯುತ್ತ ಹೊಸತನವ ರೂಪಿಸುತ,
ಬೆಳೆವ ಗಿಡ ಮರಕೆಲ್ಲ ಜೀವ ಸೆಲೆ ತುಂಬುತ್ತ;
ಹೊಸ ಗಾಳಿ ಮಳೆ ಬೆಳಕು ಎಲ್ಲವನು ನೀಡುತಲಿ,
ಬಂದಿರುವ ಹೊಸ ವರುಷ ಹರುಷ ತರಲಿ.........!
ಆಹಾ... ಏನಿದೂ..ಸೊಬಗು ಮುಗಿಲಿನಾ ಬೆಳ್ಗೊಡೆ,
ಬನ ಬನಗಳಲೂ ತಳಿರುಡುಗೆ ಹನಿಯಾಗಿ ಸುರಿದೊಡೆ;
ಸುಳಿಗುರುಳು ನಗೆಗನ್ನು ಅರಳಿಸುತ ನಕ್ಕು ಬಿಡೆ,
ವಸುಧೆಯಾ ಹೂಬನಕೆ ತನಿರಸವ ಕುಡಿಸಿಬಿಡೆ;
ಹಸಿರ ಬಿಸಿಯುಸಿರ ಹಿತವಾದ ಕಂಪನಕೆ,
ಕರಗಿ ಧರೆಗಿಳಿದು ಬಿಡು ಕುಸುಮಗಳ ವಿಕಸನಕೆ;
ಹಗಲಿರುಳು ಹಂಬಲಿಸಿ ಹಸಿದು ಕಾದಿಹ ವನಕೆ,
ಬೆಳ್ನೊರೆಯ ಹಾಲಿನಲಿ ಸ್ನೇಹ ತೋರುವ ಬಯಕೆ;
ಓ.....ಮುಗಿಲೆ ನಿನ್ನೊಲವೆ ಭುವಿಗೆ ನಲಿವೂ...,
ಬೆಳೆಯ ಉಸಿರಿಗೆ ನೀನೆಂದೂ ಜೀವ ಜಲವೂ...;
ನೀ ಒಲಿದರೇ..... ವಸುಮತಿಗೆ ವೈಭವವೂ,
ನೀ ಮುನಿದರೆ ಬಾಡಿ ಹೋಗುವುದೀ ಚೇತನವು!
.
ಜಗವನ್ನೇ ಬೆಳಗಿಸುವ ರವಿ ನಿನಗೆ ದಣಿವೇ,
ಶರಧಿಯಲಿ ಮಿಂದೆದ್ದು ನೀ ಮೇಲೆ ಬರುವೇ;
ಥಳ್ಪು ಬೆಳ್ಪುಗಳನ್ನು ಭುವಿಗೆ ನೀ ಕೊಡುವೆ,
ತನ್ನನ್ನೇ ಸುಡುತಲಿ ಜಗದ ಕಣ್ಣಾಗುವೆ;
ನೇಸರನೆ ನಿನ್ನಿಂದ ನಾ ಪಾಠ ಕಲಿವೆ,
ಮುಳುಗಿದರು ಮೇಲೆದ್ದು ಬರುವ ಕಲೆ ಕಲಿವೆ...!
ಸಪ್ತ ಸ್ವರವೂ ಸೇರಿ ಹೊಮ್ಮಿತು ಸಂಗೀತ ನಿನಾದ,ನಾದದಲೇ ಮೈ ಮರೆತು ನುಡಿಸುವ ಪ್ರತಿಭೆ ಅಗಾದ;ಏರು ಎತ್ತರಕೇರು ಕನಸ ನನಸಾಗಿಸುತ ಬೆಳೆದು,ಬೀರು ಪ್ರಜ್ವಲತೆಯನು ಹೆತ್ತವರ ನೆನೆ ನೆನೆದು;ಹುಣ್ಣಿಮೆಯ ಶಶಾಂಕನ ಕಾಂತಿಯಂತೆ ಬೆಳಗು,ಸಫಲತೆಯ ಸಾಧಿಸುತ ಧ್ರುವತಾರೆಯಂತೆ ಮಿನುಗು!
ಏರಿಳಿಯುತ ನಡೆಯುತ್ತಿರೆ ನಮ್ಮೂರಿನ ದಾರೀ, ದಣಿವರಿಯದು ಮನಸೆಳೆವುದು ಹಸಿರಿನ ಈ ಕೇರೀ; ಹಸಿರಿಂದಲಿ ಹೊಳೆಯುತ್ತಿದೆ ನಿಸರ್ಗದ ಈ ನೋಟಾ, ಸಿಂಗಾರದ ನೆಲೆವೀಡಿದು ಕಂಗೊಳಿಸುವ ತೋಟಾ; ನಿರ್ಭಯದಲಿ ನರ್ತಿಸುತಿದೆ ಈ ತಾಣದಿ ನವಿಲು, ವಾಸಂತಿಕೆ ಮೈ ಮರೆಸಿತು ಕಾನನದಾ ಚೆಲುವು; ತಂಬೆಲರಿನ ಕುಡಿ ಚಿಗುರಿದೆ ಪ್ರುಥ್ವಿಯು ಹಸಿರಾಗೀ, ಕಾರ್ಮೋಡದ ಜತೆ ಮೈತ್ರಿಯು ಪಚ್ಚನೆಯಾ ಬೆಳೆಗಾಗೀ; ನಮ್ಮ ಬೆವರಿನ ಹನಿ ಆಸರೆ ಸುಂದರ ಹೂಬನಕೆ, ಪ್ರೇಮದಲೀ ಬೆಳೆಯಿಸಿರುವ ಕುಸುಮಗಳಾ ಸೊಗಕೆ; ಜಗದೊಡೆಯಾ ಪರಮಾತ್ಮಾ ಶ್ರೀಕೃಷ್ಣಗೆ ಒಲವೂ...., ಈ ಮಣ್ಣಲಿ ಅರಳುತಲಿಹ ಪರಿಮಳದಾ ಹೂವೂ.....!
ನನ್ನ ಮನದಂಗಳದಿ ನಿನ್ನ ನೆನಪು, ಮೂಡಿಸಿತು ಸ್ಪೂರ್ತಿಯನು ಬಂತು ಹುರುಪು; ಹಸಿರಾಗಿರಲಿ ಸದಾ ನಮ್ಮ ಉಸಿರಾಗಿರಲಿ, ಈ ಭಾವನೆಗಳು ಮಧುರ ಅಲೆಯಾಗಲಿ; ನೆನಪುಗಳು ಮಾಸದೆ ಚಿರವಾಗಿರಲಿ, ಅಕ್ಕರೆಯ ಭಾಂದವ್ಯ ಅಮರವಾಗಿರಲಿ; ಸಾಗರದ ಅಲೆಯಂತೆ ದಡಕೊಮ್ಮೆ ಅಪ್ಪಳಿಸಿ, ಬಂದು ಹೋಗಲಿ ಸವಿ ನೆನಪನುಳಿಸಿ; ಉಲ್ಲಾಸ ಉತ್ಸಾಹದಾ ಚಿಲುಮೆ ಹರಿಸಿ, ಪ್ರೀತಿ ತುಂಬಿದ ನುಡಿಯ ಸವಿಯನುಣಿಸಿ.....!
ಹೂವ ಲೋಕದ ರಾಣೀ...., ಅರೆ ಬಿರಿದು ನಗುತಿರುವೆ; ಮುಳ್ಳು ಗಿಡದಲಿ ಅರಳಿ ನೀ...., ಕಂಪು ಬೀರುತಲಿರುವೆ; ಭಾವ ಲೋಕದ ಹೂ ಬನದ ಚೆಲುವೇ, ನೆಟ್ಟಿರುಳು ಮೊಗ್ಗರಳಿ ನಿಂತಿರುವೆ; ಎಲ್ಲ ಕಂಗಳ ಸೆಳೆದು ಪರಿಮಳವ ಪಸರಿಸುವೆ, ಕೀಳದಿರಿ ಎನ್ನ ನಾ ಧರೆಯ ಸಿರಿ ಎನುವೇ....!